ಹರಿದಾಸರ ಕೃತಿಗಳು, ಅವರು ಬಳಸುವ ಒಂದೊಂದು ಪದಗಳು ಕೂಡ ಅನೇಕ ಅರ್ಥಗಳನ್ನು ಒಳಗೊಂಡಿರುತದೆ.
ಹೀಗಿರುವಾಗ ನಾವು ದಾಸಾರ್ಯರು ಬಳಸಿದ ಪದಗಳ ಆಂತರ್ಯವನ್ನು ತಿಳಿಯುವುದು ತುಂಬಾ ಕಷ್ಟ ಹಾಗು ಯೋಗ್ಯತೆ ಅಂತೂ ಸರ್ವಥಾ ಅಲ್ಲ.
ಆದರೂ ಅವರ ಕೃಪೆಯಿಂದ ನಮ್ಮನಮ್ಮ ಯೋಗ್ಯತಾನುಸಾರವಾಗಿ ಅನುಸಂಧಾನಪೂರ್ವಕ್ಕೆ ಬೇಕಾದಷ್ಟು ಅರ್ಥೈಸಿಕೊಳ್ಳುತ್ತೇವೆ.
ವರದೇಂದ್ರಯತಿ ಚಕ್ರವರ್ತಿ ನಿರಂ |
ತರ ವರ್ಣಿಸುವೆ ನಿಮ್ಮಕೀರ್ತೀ |
ಪರಮಾಕರುಣಿ ನಿಮ್ಮಾ ಚರಣಕಮಲ ಯುಗ್ಮ|
ಕೆರಗಿಬೇಡುವೆ ವರವಾ ಯೆಮ್ನನೂ ಹೊರವಾ ॥ ಪ ॥
ಭಾವಾರ್ಥ -
ಶ್ರೀ ವರದೇಂದ್ರತೀರ್ಥರೇಂಬ ಯತಿ ಚಕ್ರವರ್ತಿಯನ್ನು, ಅವರ ಕೀರ್ತಿಯನ್ನು ಸದಾಕಾಲ ವರ್ಣಿಸುವೆವು
ಪರಮ ಕರುಣಾಳುಗಳಾದ ನಿಮ್ಮ ಕಮಲದಂತೆ ಇರುವ ಪಾದದ್ವಯಗಳಿಗೆ ಎರಗಿ ಬೇಡುವೆವು ವರವನ್ನು , ನಮ್ಮನೆಲ್ಲ ಸಲಹುವಂತಹ....॥ ಪ ॥
ನತಜನ ಬಂಧೂ ನೀನೆಂದು ತಿಳಿದು |
ನತಿಸಿದೇ ಗುಣಗಣಸಿಂಧು |
ಪ್ರತಿಗಾಣೆ ನಿಮಗೆ ಸುವ್ರತಿವರ ಪ್ರಣತಾ ಕಾ |
ಮಿತ ಕಲ್ಪತರುವೆ ನಿರ್ಜಿತ ಮಾರಾಮಾರ್ಗಣ | ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವದು ನಿಮ್ಮದಾನ |
ಪ್ರತತಿ ಸಾಂಪ್ರತ ಮೃದುಮಧುರ ವಚನಾ ಶಾಸ್ತ್ರ ಪ್ರವಚನಾ ॥ ೧ ॥
ಪದವಿಂಗಡಣೆ -
ನತಜನ = ನತ + ಜನ
ಗುಣಗಣಸಿಂಧು = ಗುಣ + ಗಣ + ಸಿಂಧು
ಮಾರಾಮಾರ್ಗಣ = ಮಾರ + ಮಾರ್ಗಣ
ಪದಾರ್ಥ-
ನತ = ನಮಸ್ಕರಿಸುವುದು, ಶರಣಾಗುವುದು
ಗುಣಗಣಸಿಂಧು = ಗುಣಗಳ ರಾಶಿಗಳ ಸಾಗರ
ಪ್ರತಿಗಾಣೆ = ಸರಿಗಾಣೆ
ಸುವ್ರತಿವರ = ವೇದ ಹಾಗು ಮಧ್ವ ಶಾಸ್ತ್ರದ ಮಾರ್ಗ ಬಿಡದೆ ಅನುಸರಿಸುವ
ಪ್ರಣತಾ = ನಮಸ್ಕಾರಿಸುವೆನು
ನಿರ್ಜಿತ = ಸೋಲರಿಯದ, ಅಜೇಯ
ಮಾರ = ಮನ್ಮಥ, ಕಾಮ, ಲೌಕಿಕ ವಿಷಯಾಸಕ್ತಿ
ಮಾರ್ಗಣ = ಬಾಣ
ಕ್ಷಿತಿಪರಿಗೆ = ಭೂಮಿಯಲ್ಲಿ ವಾಸಿಸುವ ಜನ
ಪ್ರತತಿ = ಗುಂಪು
ಸಾಂಪ್ರತ = ಈ ಕ್ಷಣದ
ಭಾವಾರ್ಥ -
ನಿಮ್ಮನ್ನು ಆಶ್ರಯಿಸಿ ಬಂದ ಭಕ್ತರಿಗೆ ಸದಾ ಬಂಧುಗಳಂತೆ ಇರುವಿರಿ, ಇದನ್ನು ತಿಳಿದು ನಾನು ಸದ್ಗುಣಗಳ ರಾಶಿಯ ಸಮುದ್ರದಂತೆ ಇರುವ ನಿಮ್ಮನ್ನು ನಮಿಸುತ್ತೇನೆ,
ಶೃತಿ ಸಮ್ಮತವಾದ ಮಧ್ವ ಶಾಸ್ತ್ರವನ್ನು ಬಿಡದೆ ಪಾಲಿಸುವ ನಿಮಗೇ ಸರಿಸಾಟಿ ಕಾಣೆ, ಶರಣಾಗತರಿಗೆ, ಬೇಡಿ ಬಂದವರಿಗೆ ಕಲ್ಪತರುವಿನಂತಿರುವ, ಕಾಮನ ಬಾಣ(ಲೌಕಿಕ ವಿಷಯಗಳಲ್ಲಿನ ಆಸಕ್ತಿ) ಗೆದ್ದ ಸದ್ಯತಿ, ಬೇಡಿದ ಕೊಡಲೇ ತತ್ಕ್ಷಣದಲ್ಲಿ ದಾನ ರೂಪವಾದಂತಹ ಅನುಗ್ರಹದ ಮಳೆಯನ್ನೇ ಸುರಿಸುವ ಹಾಗೂ ಶಾಸ್ತ್ರ ಪ್ರವಚನಗಳಲ್ಲಿ ನಿಮ್ಮ ನಿರರ್ಗಳವಾದ ಮಧುರ ವಚನಗಳ ಕಂಡು ಭೂಮಿಯ ರಾಜರಿಗೆ ಪರಮ ಅದ್ಭುತವೆನಿಸುತ್ತಿಹದು
ಮರುತಾ ಮತಾಂಬುಧಿ ಚಂದ್ರಾ ಚಾಮೀ |
ಕರವರ್ಣಾ ಸರಸಾ ಕವೀಂದ್ರಾ |
ಪರಮತ ತಿಮಿರ ಭಾಸ್ಕರ ವಸುಧೀಂದ್ರ ಸ 1
ದ್ಗುರು ಕರಸಂಜಾತ ನಿರುಪಮ ನಿರ್ಭೀತಾ |
ಖರಮಥನಪದಕೋಕನದ ಮಧುಕರ ಕೃಪಾಕರ ಕರವಪಿಡಿದು | ದ್ಧರಿಸುವದು ಭೂಸುರಕುಲೋತ್ತಂಸಾ ನಮೋ ಪರಮಹಂಸಾ ॥
ಪದವಿಂಗಡಣೆ -
ಮತಾಂಬುಧಿ = ಮತ + ಅಂಬುಧಿ
ಚಾಮೀಕರವರ್ಣ = ಚಾಮೀಕರ +ವರ್ಣ
ಖರಮಥನಪದಕೋಕನದ = ಖರ + ಮಥನ + ಪದ + ಕೊಕನದ
ಭೂಸುರಕುಲೋತ್ತಂಸಾ = ಭೂಸುರ + ಕುಲ + ಉತ್ತಂಸ
ಪದಾರ್ಥ-
ಚಾಮೀಕರ = ಬಂಗಾರ
ತಿಮಿರ = ಅಂಧಕಾರ
ಖರ = ದೈತ್ಯ
ಖರಮಥನಪದ = ದೈತ್ಯ ಕುಲಾಂತಕನಾದ ನಾರಾಯಣನ ಪಾದಗಳು
ಕೋಕನದ = ಕಮಲ
ಉತ್ತಂಸ = ಉತ್ತಮ
ಭಾವಾರ್ಥ -
ಮರುತ ಮತವೆಂಬ ಸಮುದ್ರಕ್ಕೆ ಚಂದ್ರರಂತೆ ಪ್ರಕಾಶಿಸುವ, ಬಂಗಾರದ ಬಣ್ಣದ ಸೊಬಗಿನಂತಿರುವ ಜ್ಞಾನಿಗಳ ಅರಸ,
ಪರವಾದಿಗಳೆಂಬ ಅಂಧಕಾರಕ್ಕೆ ಸೂರ್ಯನಂತಿರುವ ಶ್ರೀ ವಸುಧೀಂದ್ರತೀರ್ಥರೆಂಬ ಸದ್ಗುರುವಿನ ಸಾಟಿಯಿಲ್ಲದ ನಿರ್ಭೀತ ಶಿಷ್ಯರಾದ ನೀವು,
ಸದಾಕಾಲ ದುಂಬಿಯು ಕೆಂದಾವರೆಗೆ ಸುತ್ತುವಂತೆ ದೈತ್ಯ ಕುಲಾಂತಕನಾದ ನಾರಾಯಣನ ಪಾದಗಳಿಗೆ ಆಶ್ರಯಿಸಿರುವಿರಿ,
ಕೃಪಾಕರರಾದ ನೀವು, ನಮ್ಮನ್ನು ಕೈ ಹಿಡಿದು ಉದ್ಧರಿಸಬೇಕು, ಪಂಡಿತರ ಹಾಗು ಜ್ಞಾನಿಗಳ ಗುಂಪಿಗೆ ಕಲಶಪ್ರಾಯರೇನಿಸಿದ, ಪರಮಹಂಸರಾದ ನಿಮಗೆ ನಮಿಸುತ್ತೇನೆ
ಕಲಿತಾ ಸುಂದರ ಮಂದಹಾಸಾ ಹೇ ನಿ ।
ಷ್ಕಲುಷಾ ಸುತತ್ವ ವಿಲಾಸಾ |
ಗಳಿತಾಘಸಂಘ ನಿಶ್ಚಲ ಜಗನ್ನಾಥವಿಠಲ |
ನೊಲಿಮಿಯಾ ಪಡೆದಿಳೆಯೊಳು ಚರಿಸುವಾ |
ಭಳಿರೆ ಪ್ರತಿಯೋಗಿಗಳೆನಿಪ ಕರಿಕಲಭ ಕೇಸರಿ ನಿನ್ನ ದಾಸರೊ | ಳೊಲಿದು ಪಾಲಿಪುದನವರತೆ ಯನ್ನಾ ನಂಬಿದೆನೊ ನಿನ್ನಾ ॥ ೩ ॥
ಪದವಿಂಗಡಣೆ -
ಗಳಿತಾಘಸಂಘ = ಗಳಿತ + ಅಘ + ಸಂಘ
ಪಡೆದಿಳೆಯೊಳು = ಪಡೆದು + ಇಳೆಯೊಳು
ಪ್ರತಿಯೋಗಿಗಳೆನಿಪ = ಪ್ರತಿಯೋಗಿಗಳು + ಏನಿಪ
ಕರಿಕಲಭ = ಕರಿ + ಕಲಭ
ಪದಾರ್ಥ-
ಗಳಿತ = ತೆಗೆಯುವುದು, ಬಿಳಿಸುವುದು
ಅಘ = ದುಃಖ, ಪಾಪಗಳು
ಸಂಘ = ಸಮೂಹ, ಗುಂಪು
ನಿಶ್ಚಲ = ಅಚಲವಾದ, ಸ್ಥಿರವಾದ
ಪ್ರತಿಯೋಗಿಗಳು = ವಾದದಲ್ಲಿ ಎದುರಾಳಿ
ಕರಿಕಲಭ = ಆನೆಯ ಮರಿ, ಯೌವನದ ಆನೆ, ಮದ್ದಾನೆ
ಕೇಸರಿ = ಹುಲಿ
ಭಾವಾರ್ಥ -
ಸುಂದರವಾದ ಮಂದಹಾಸದಿಂದ ಕೂಡಿದ ನೀವು , ದೋಷರಹಿತವಾದಂತಹ, ಪರಿಪೂರ್ಣವಾದಂತಹ ಸೊಬಗಿನ ಮಧ್ವಶಾಸ್ತ್ರದಲ್ಲಿ ಅನಾಯಾಸವಾಗಿ ವಿಹರಿಸುವಿರಿ.
ಭಕ್ತರ ಪಾಪಗಳ ಹಾಗೂ ದುಃಖಗಳ ಸಮೂಹವನ್ನೇ ನಾಶ ಮಾಡುವಲ್ಲಿ ಸ್ಥಿರ(ನಿರತ)ವಾಗಿರುವ ಜಗನ್ನಾಥ ವಿಠಲನ ಒಲುಮೆಯ ಪಡೆದು ಭೂಮಿಯಲ್ಲಿ ಸಂಚರಿಸುವರ,
ಪ್ರತಿಯೊಗಿಗಳೆಂಬ ಮದ್ದಾನೆಗಳಿಗೆ ಹುಲಿಯಂತಿರುವ ಗಜಕೇಸರಿ,
ನಿಮ್ಮ ದಾಸರಿಲ್ಲಿ ಒಬ್ಬಾನಾದ ನನಗೆ(ನಮಗೆ) ಅನವರತವಾಗಿ ಪಾಲಿಸಬೇಕು ಎಂದು ನಿಮ್ಮನ್ನು ನಂಬಿದೇನೆ
ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:
||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||