Friday, 17 February 2023

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ

ಹರಿದಾಸರ ಆರಾಧ್ಯ ದೈವನಾದ ಶ್ರೀ ಪಾಂಡುರಂಗ ವಿಠಲನ ಮುರುತಿಯ ವರ್ಣಿಸುವ ಶ್ರೀ ಜಗನ್ನಾಥ ದಾಸರ ಅದ್ಭುತವಾದ ಕೃತಿ

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ | ಇಂದುಭಾಗ ನಿವಾಸ ನರನ ಸಾರಥಿಯಾ ॥ ಪ ||

ಪದಾರ್ಥ -
ಇಂದು = ಚಂದ್ರ
ನರ = ಅರ್ಜುನ

ಭಾವಾರ್ಥ -
ಚಂದ್ರಭಾಗ ನದಿಯ ತೀರದಲ್ಲಿ ಇರುವ  ಪಂಢರಾಪುರದಲ್ಲಿ ನಿಂತಿರುವಂತಹ, ಅರ್ಜುನನ ಸಾರಥಿಯಾದ, 
ಆ ಪಾಂಡುರಂಗನ ದಿವ್ಯ ಮುರುತಿಯ ಎಂದು ನೋಡುವೆನು 

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರಾ ।
ತರುಣೀಂದುಚ್ಛವಿ ತಿರಸ್ಕರಿಸೂವ ಪ್ರಖರಾ |
ಕಿರಿಗೆಜ್ಜೆ ಕಡೆಯಾ ನೂಪುರ ಪೆಂಡೆ ಶಫರಾ । 
ತ್ಯೆರ ಜಂಘೆ ಜಾನು ಭಾಸ್ವರ ರತ್ನ ಮುಖರಾ ॥ ೧ ॥

ಪದವಿಂಗಡಣೆ - 
ಅರುಣಾಬ್ಜೋಪಮ = ಅರುಣ + ಅಬ್ಬ + ಉಪಮ
ಚರಣಾಂಗುಲಿ = ಚರಣ + ಅಂಗುಲಿ
ತರುಣೀಂದುಚ್ಛವಿ = ತರುಣ + ಇಂದು + ಉಚ್ಛವಿ
ಕಿರಿಗೆಜ್ಜೆ = ಕಿರಿ + ಗೆಜ್ಜೆ 

ಪದಾರ್ಥ -
ಅರುಣಾಬ್ಜೋಪಮ = ಕೆಂಪು ಕಮಲದಂತೆ ಇರುವ,
ಚಾರು = ಸುಂದರವಾದ, ತರುಣೀಂದುಚ್ಛವಿ = ಬಾಲ ಚಂದ್ರನ / ಈಗಷ್ಟೇ ಉದಯಿಸಿದ ಚಂದ್ರನ ಕಾಂತಿಯನ್ನು,ತ್ಯೆರ = ಮುಸುಕಿನಲ್ಲಿ
ಭಾಸ್ವರ = ಪ್ರಕಾಶಿಸುವ,
ಮುಖರಾ = ಮುಕುರ = ಕನ್ನಡಿ 

ಭಾವಾರ್ಥ - 
ಕೆಂದಾವರೆದಂತಹ ಸುಂದರವಾದ ಚರಣ, ಅಂಗುಲಿ, ನಖರಗಳ್ಳುಳವನೆ,
ಉದಯಿಸಿದ ಚಂದ್ರನ ಕಾಂತಿಯನ್ನೂ ತಿರಸ್ಕರಿಸುವಂತಹ ಪ್ರಖರವಾದ ಕಾಂತಿಯುಳ್ಳವನ,
ಕಾಲಿನಲ್ಲಿ ಮೀನಿನ ಆಕಾರದಂತೆ ಇರುವ ಗೆಜ್ಜೆ, ಕಿರುಗೆಜ್ಜೆ, ಕಡೆಯ, ಪೆಂಡೆಗಳು ಇರುವ ನೂಪುರಗಳು, 
ಮರೆಯಲ್ಲಿ ಇರುವ ತೊಡೆ ಮೊಣಕಾಲುಗಳು, ಸೂರ್ಯನಂತೆ ಕಾಂತಿ, ರತ್ನದಂತೆ ಗಟ್ಟಿ, ಕನ್ನಡಿಯಂತೆ ಮಿಂಚುತ್ತಿರುವವನ 

ರಂಭಾ ಪೋಲುವ ವೂರು ಪೊಂಬಣ್ಣಾಂಬರವಾ |
ಕುಂಭಿ ಮಸ್ತಕದೊಲ್ನಿತಂಬದಿ ಪೊಳವಾ |
ಕಂಬು ಮೇಖಳ ಕಂಜ ಗಂಭೀರನಾಭಿ |
ಅಂಬುಧಿಶಾಯಿ ವಿಧಿ ಶಂಭು ಪೂಜಿತನಾ ॥ ೨ ॥

ಪದವಿಂಗಡಣೆ -
ಪೊಂಬಣ್ಣಾಂಬರವಾ = ಪೊಂಬಣ್ಣ + ಅಂಬರವ
ಮಸ್ತಕದೊಲ್ನಿತಂಬದಿ = ಮಸ್ತಕದೊಲ್ + ನಿತಂಬದಿ
ಅಂಬುಧಿಶಾಯಿ = ಅಂಬುದ್ಧಿ + ಶಾಯಿ 

ಪದಾರ್ಥ -
ರಂಭಾ - ಬಾಳೆಯಗಿಡ, ವೂರು = ಊರು = ತೊಡೆ/ಕಾಲು,
ಪೊಂಬಣ್ಣಾಂಬರವಾ = ಬಂಗಾರ ಬಣ್ಣದ ವಸ್ತ್ರ, ಕುಂಭಿ= ಮಡಿಕೆ, ಮಸ್ತಕ = ತಲೆ, ನಿತಂಬ = ಪೃಷ್ಠ ಭಾಗ, ಕಂಬು = ಶಂಖ, ಮೇಖಳ = ಡಾಬು, ಕಂಜ = ಕಮಲ, ನಾಭಿ = ಹೊಕ್ಕಳು, ಅಂಬುಧಿಶಾಯಿ = ಸಾಗರದಲ್ಲಿ ಮಲಗಿದವ, ವಿಧಿ = ಬ್ರಹ್ಮ ದೇವರು, ಶಂಭು = ರುದ್ರ ದೇವರು

ಭಾವಾರ್ಥ -
ಬಾಳೆಯ ಗಿಡದಂತೆ ಕಾಲುಗಳ್ಳುಳವನ , ಬಂಗಾರ ಬಣ್ಣದ ವಸ್ತ್ರವನ್ನು ಧರಿಸಿದವನ,
ಮಡಿಕೆಯ ಆಕಾರದಂತಿರುವ ಮಸ್ತಕ, ಹೊಳೆಯುತ್ತಿರುವ ಹಿಂಬದಿ,
ಕಮಲದಂತಹ ಗಂಭೀರವಾದ ನಾಭಿಯ ಹತ್ತಿರ ಶಂಖ, ನಾಭಿಯ ಸುತ್ತ ಸುಂದರವಾದ ಡಾಬು .
ಸಮುದ್ರ ದಲ್ಲಿ ಮಲಿಗಿದವ ಅಂದರೇ ಸಾಗರದಲ್ಲಿ ಶಯಿಸುವ, ಬ್ರಹ್ಮನಿಂದ ಹಾಗು ರುದ್ರನಿಂದ ಪೋಜಿತನಾದ ಶ್ರೀಮನ್ನಾರಾಯಣನ

ಲವಕುಕ್ಷಿ ತ್ರಿವಳೀ ಭಾರ್ಗವಿವತ್ಸ ಉದ್ಯ |
ದ್ರವಿ ಪೋಲುವ ಕೌಂಸ್ತುಭ ನವ ವೈಜಯಂತೀ | 
ಸುವಿಶಾಲ ಹೃದಯದೋಳ್ವಿವಿಧಾ ಹಾರಗಳಾ |
ನವನೀತ ಚೋರಾ ಶ್ರೀ ಪವಮಾನಾರ್ಚಿತನಾ || ೩ ||

ಪದವಿಂಗಡಣೆ -
ಲವಕುಕ್ಷಿ = ಲವ + ಕುಕ್ಷಿ
ಭಾರ್ಗವಿವತ್ಸ = ಭಾರ್ಗವಿ  + ವತ್ಸ 
ಉದ್ಯದ್ರವಿ = ಉದಯದ + ರವಿ
ಹೃದಯದೋಳ್ವಿವಿಧಾ = ಹೃದಯದೋಳ್ + ವಿವಿಧ

ಪದಾರ್ಥ -
ಲವಕುಕ್ಷಿ = ಚಿಕ್ಕದಾದ ಕುಕ್ಷಿ = ಚಿಕ್ಕ ಹೊಟ್ಟೆಯ ಭಾಗ,
ತ್ರಿವಳೀ = ಮೂರು ಮಡಿಕೆ ಇರುವ, ಭಾರ್ಗವಿ = ವಜ್ರ,
ವತ್ಸ = ಎದೆ, ಉದ್ಯದ್ರವಿ = ಉದಯಿಸಿದ ಸೂರ್ಯ,
ಪೋಲುವ = ಹೋಲುವ, ಕೌಂಸ್ತುಭ = ಕೌಸ್ತುಭ ಮಣಿ,
ವೈಜಯಂತೀ = ಶ್ರೀ ನಾರಾಯಣನು ಧರಿಸುವ ಒಂದು ಬಗೆಯ ಹಾರ, ಸುವಿಶಾಲ = ಸುಂದರವಾದ ವಿಶಾಲ,
ನವನೀತ = ಬೆಣ್ಣೆ 

ಭಾವಾರ್ಥ -
ಚಿಕ್ಕದಾದ, ಮೂರು ಕಡೆ ಮಡಿಕೆಯ ಹೊಟ್ಟೆಯ ಭಾಗ, ವಜ್ರದಂತೆ ಇರುವ ಎದೆಯೂ, 
ಉದಯಿಸಿದ ಸೂರ್ಯನಂತೆ ಕಂಗೊಳಿಸುವ ಕೌಸ್ತುಭ ಮಣಿ, ನವ ವೈಜಯಂತಿಯ ಮಾಲೆ,
ವಿವಿಧವಾದ ಹಾರಗಳು ಆ ಸು(ಸುಂದರವಾದ)-ವಿಶಾಲವಾದ ಎದೆಯಲ್ಲಿ ಶೋಭಿಸುತ್ತಿರುವವನ,
ಶ್ರೀ ಅಂದರೇ ಲಕ್ಷ್ಮೀ ದೇವಿ ಮತ್ತು ವಾಯುದೇವರು ಅರ್ಚಿಸುವಂತಹ ಬೆಣ್ಣೆಯ ಕಳ್ಳ ಶ್ರೀ ಕೃಷ್ಣನ 

ಪದಕಾ ಸರಗಿಯು ಜಾಂಬೂನದ ಕಂಬು ಕಂಠಾ | 
ರದನೀಕರ ತೆರ ಬಾಹು ಚದುರಾ ಭುಜಕೀರ್ತಿ | 
ಬದರಾ ಸಂಕಾಶಾ ಅಂಗದ ರತ್ನ ಕಟಕಾ | 
ಪದುಮಾರುಣ ಕರವಾ ಮಧ್ಯದಲಿ ಯಿಟ್ಟವನಾ || ೪ ||

ಪದವಿಂಗಡಣೆ -
ಪದುಮಾರುಣ = ಪದುಮ + ಅರುಣ

ಪದಾರ್ಥ -
ಸರಗಿ = ಒಂದು ಹಾರ, ಜಾಂಬೂನದ = ಬಂಗಾರದ,
ಕಂಬು = ಶಂಖ, ರದನೀಕರ = ಆನೆಯ ದಂತ, ತೆರ = ತರಹ,
ಚದುರಾ = ಸುಂದರವಾದ, ಭುಜಕೀರ್ತಿ = ಭುಜಕ್ಕೆ ಧರಿಸುವ ಆಭರಣ, ಬದರ = ಚಂದ್ರ, ಸಂಕಾಶಾ = ಅದರಂತೆ, ಅಂಗದ = ತೋಳಿನಲ್ಲಿ ಧರಿಸುವ  ಒಂದು ಆಭರಣ, ಕಟಕ = ಕಡಗ,
ಪದುಮಾರುಣ = ಕೆಂಪು ಕಮಲ / ಕೆಂದಾವರೆ, ಮಧ್ಯದಲಿ = ಸೊಂಟದಲ್ಲಿ

ಭಾವಾರ್ಥ -
ಶಂಖದಂತೆ ಮೂರು ಗೆರೆಗಳು ಇರುವ ಆ ಕಂಠ, ಅದರಲ್ಲಿ ಬಂಗಾರದ ಹಾರದಲ್ಲಿ ಪದಕವಿದೆ,
ಆನೆಯ ದಂತದಂತೆ ಇರುವ ಬಾಹುಗಳು, ಅದಕೆ ಸುಂದರವಾದ ಭುಜಕೀರ್ತಿ
ಚಂದ್ರನಂತೆ ಪ್ರಕಾಶಿಸುವ ತೋಳುಬಳೆಗಳು, ಕೈಯಲ್ಲಿ ರತ್ನದ ಕಡಗ,
ಕಮಲದಂತೆ ಕೆಂಪಾದ ಕರಗಳನ್ನು ಸೊಂಟದಲ್ಲಿ ಇಟ್ಟವನ

ವಿಧು ಬಿಂಬೋಪಮ ಚಲುವ ವದನ ಕೆಂದುಟಿಯಾ | ಭಿದುರಾಭ ದಶನಾಳಿಂಗದಿರೊಲ್ಕಿರಿ ನಗಿಯಾ |
ಕದಪು ಕನ್ನಡಿ ನಾಸಾ ತುದಿ ಚಂಪಕ ತೆನಿಯಾ | ಉದಕೇಜಾಯತ ನೇತ್ರ ಯದು ವಂಶೋದ್ಭವನಾ || ೫ ||

ಪದವಿಂಗಡಣೆ -
ಭಿದುರಾಭ = ಭಿದುರ /ಬಿದುರ /ಬದರ + ಆಭ
ದಶನಾಳಿಂಗದಿರೊಲ್ಕಿರಿ = ದಶನ + ಆಳಿಂಗದಿ/ ಆಲಿಂಗದಿ + ರೊಲ್ + ಕಿರಿ
ಉದಕೇಜಾಯತ = ಉದಕೇ + ಜಾಯತ

ಪದಾರ್ಥ -
ವಿಧು = ಚಂದ್ರ, ಬಿಂಬೋಪಮ = ಬಿಂಬ ದಂತೆ / ಅದರಂತೆ,
ವದನ = ಮುಖ, ಭಿದುರಾಭ = ಚದುರಿದಂತೆ / ಚಂದ್ರನಂತೆ, ದಶನ = ಹಲ್ಲುಗಳು, ಕಿರಿನಗೆ = ಕಿರುನಗೆ, ಕದಪು = ಕನ್ನಡಿ,
ನಾಸ = ಮೂಗು, ಉದಕೇಜಾಯತ = ಕಮಲ

ಭಾವಾರ್ಥ -
ಚಂದ್ರನಂತೆ ಪ್ರಕಾಶಿಸುವ ಚೆಲುವಾದ ಮುಖ, ಅದರಲ್ಲಿ ಕೆಂಪಾದ ತುಟಿ,
ಆ ತುಟಿಗಳ ಕಿರುನಗೆಯ ಆಲಿಂಗನದಲ್ಲಿ ಇರುವ ಚಂದ್ರನಂತೆ ಕಾಂತಿಯುಳ್ಳ ಹಲ್ಲುಗಳು,
ಕನ್ನಡಿಯಂತೆ ಸ್ವಚ್ಛವಾಗಿ ಹೊಳೆಯುವ ಕೆನ್ನೆ, ಸಂಪಿಗೆಯ ತೆನೆಯಂತೆ ಸುಂದವಾಗಿ ಇರುವ ಮೂಗಿನ ತುದಿ,
ಕಮಲದಂತೆ ಇರುವ ಕಣ್ಣುಗಳ್ಳುಲವನ, ಯದುವಂಶದಲ್ಲಿ ಜನಿಸಿದವ ಶ್ರೀ ಕೃಷ್ಣನ

ಕಲಿತಾ ಕುಂಡಲ ಕರ್ಣ ಸುಲತಾ ಭ್ರೂಯುಗಳಾ | 
ಲಲಿತಾ ಬಾಲ ಶಶಾಂಕಾ ತಿಲಕಾಂಕಿತ ಫಾಲಾ | ಅಳಿಜಾಲಾವೆನಿಪಾ ಕುಂತಳ ರತ್ನಚಕಿತಾ | 
ಕಲಧೌತಾ ಮುಕುಟಾ ದಿಗ್ವಿಲಯಾ ಬೆಳಗುವದಾ ॥ ೬॥

ಪದವಿಂಗಡಣೆ -
ಭ್ರೂಯುಗಳಾ = ಭ್ರೂ + ಯುಗಳ
ಅಳಿಜಾಲಾ = ಅಳಿ + ಜಾಲ

ಪದಾರ್ಥ -
ಕಲಿತಾ = ಕೂಡಿದ, ಕುಂಡಲ = ಕಿವಿಯ ಆಭರಣ,
ಸುಲತಾ = ಸುಂದರವಾದ ಲತೆ, ಭ್ರೂಯುಗಳಾ = ಎರಡು ಹುಬ್ಬುಗಳು, ಲಲಿತಾ = ಸುಂದರವಾದ, ಫಾಲಾ = ಹಣೆ,
ಅಳಿಜಾಲಾವೆನಿಪಾ = ಭೃಂಗದ ಗುಂಪಿನನಂತೆ, ಕುಂತಳ = ಕೂದಲು, ಚಕಿತಾ = ವಿಸ್ಮಯವಾದ, ಕಲಧೌತಾ = ಬಂಗಾರ,
ದಿಗ್ವಿಲಯಾ = ಬ್ರಹ್ಮಾಂಡ

ಭಾವಾರ್ಥ -
ಕಿವಿಗಳಿಗೆ ಕೂಡಿದ ಕುಂಡಲ , ಸುಂದರವಾದ ಲತೆಗಳಂತೆ ಹುಬ್ಬುಗಳು,
ಉದಯಿಸಿದ ಚಂದ್ರನಂತೆ ಸುಂದರವಾಗಿ ಪ್ರಕಾಶಮಾನವಾದ ತಿಲಕವು ಹಣೆಯಮೇಲೆ,
ಭೃಂಗದ ಗುಂಪಿನನಂತೆ ದಟ್ಟವಾಗಿ ಇರುವ, ರತ್ನದಂತೆ ವಿಸ್ಮಯವಾಗಿ ಹೊಳೆಯುವ ಗುಂಗುರು ಕೂದಲು,
ಯಾರ ಚಿನ್ನದ ಮುಕುಟವು ಇಡಿಯ ಬ್ರಹ್ಮಾಂಡವನ್ನೇ ಬೆಳಗುವುದೋ

ಶಠ ಕೂರ್ಮರೂಪಿಯಾ ಕಿಟಿ ಮಾನವಹರಿಯಾ ।
ವಟು ಭಾರ್ಗವ ಕಾಕುಸ್ಥ ಶಕಟ ಕಂಸ ದ್ವಿಷಿಯಾ | ನಿಟಿಲಾಂಬಕ ಸಹಯಾ ಖಳ ಕಟಕಾರಿ ಭೀಮಾ |
ತಟಶಾಯೀ ಜಗನ್ನಾಥವಿಠಲನಾ ಕೃತಿಯಾ || ೭ ||

ಪದವಿಂಗಡಣೆ -
ಮಾನವಹರಿಯಾ = ಮಾನವ + ಹರಿ
ಕಟಕಾರಿ = ಕಟಕಾ + ಅರಿ 
ಜಗನ್ನಾಥವಿಠಲನಾ ಕೃತಿಯಾ = ಜಗನ್ನಾಥವಿಠಲನ + ಆಕೃತಿ

ಪದಾರ್ಥ -
ಶಠ = ಚತುರ, ಕಿಟಿ = ವರಾಹ, ಮಾನವಹರಿ = ನರಹರಿ,
ಕಾಕುಸ್ಥ =  ಇಕ್ಷ್ವಾಕು ವಂಶದಲ್ಲಿ ಜನಿಸಿದವ = ಅವನ ವಂಶದಲ್ಲಿ ಜನಿಸಿದ ಶ್ರೀ ರಾಮಚಂದ್ರ,
ದ್ವಿಷಿಯಾ = ದ್ವೇಷಿಯ, ನಿಟಿಲಾಂಬಕ = ಹಣೆಯಲ್ಲಿ
 ಕಣ್ಣುಳ್ಳವ = ರುದ್ರದೇವರು, ಖಳ = ದುಷ್ಟ,
ಕಟಕಾರಿ = ಸೈನೆಯ ವೈರಿ, ಆಕೃತಿ  = ಆಕಾರ

ಭಾವಾರ್ಥ -
ಚತುರತನದಿಂದ ವೇದವ ರಕ್ಷಿಸಿದ ಮತ್ಸ್ಯರೂಪನ , ಕೂರ್ಮರೂಪನ, ವರಾಹರೂಪನ, ನರಹರಿರೂಪನ,
ವಾಮನರೂಪನ, ಪರಶುರಾಮ ರೂಪನ, ರಾಮಚಂದ್ರನ, ಶಕಟಾಸುರ, ಕಂಸನ ವೈರಿಯಾದ ಕೃಷ್ಣನ,
ರುದ್ರದೇವರ ಸಹಾಯಕನಾದ ಅಂದರೇ ಮೋಹಶಾಸ್ತ್ರ ಭೋದಿಸಿದ ಬೌದ್ಧರೂಪಿಯ, ದುಷ್ಟರ ಸೈನ್ಯಯ ವೈರಿಯಾದ ಕಲ್ಕಿ ರೂಪನ,
ಭೀಮಾ ನದಿಯ ತಟದಲ್ಲಿ ನೆಲೆಸಿರುವ ಜಗನ್ನಾಥ ವಿಠಲನ, ಪಾಂಡುರಂಗ ಮೂರುತಿಯ

             ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||