Thursday, 2 April 2020

ರಾಮ ಹಾಗು ಕೃಷ್ಣಾ....

ಎಲ್ಲಾ ದಾಸರು ಸಂತರು ರಾಮಕೃಷ್ಣರನ್ನು ಮುಕ್ತ ಕಂಠದಿಂದ ಹಾಡಿ ಭಕ್ತಿ ಮಾರ್ಗದಲ್ಲಿ ಕುಣಿಯುತ್ತಾ ನಲಿಯುತ್ತಾ,  ಮುಕುತಿಗೆ ತುಂಬಾ ಸರಳವಾದ ಮಂತ್ರವನ್ನು ಹಾಡಿ ಹೇಳಿದಾರೆ.
ಕೃಷ್ಣಾ ಎಂದರೆ ತನ್ನ ಲೋಕವನ್ನೇ ಕೊಡುವನು ಎಂದು ವ್ಯಾಸರಾಜರು ಹೇಳಿದ್ದಾರೆ. 
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆಯು ಅನ್ನೋ ಪುರಂದರ ದಾಸರ ಪದ್ಯವೂ ಉಂಟು.
 
ರಾಮಾವತಾರ ಹಾಗು ಕೃಷ್ಣಾವತಾರ ನಮ್ಮ ಕಲಿಯುಗಕ್ಕೆ ತುಂಬಾ ಹತ್ತಿರವಾಗಿ ಆಗಿಹೋದ ಅವತಾರಗಳು.
ಹೀಗಾಗಿಯೇ ರಾಮ ಕೃಷ್ಣರು ನಮಗೆ ತುಂಬಾ ಬೇಗ ಸಿಗುತ್ತಾರೆ ಅನ್ನೋ ನಂಬಿಕೆ ಹಾಗು ಸತ್ಯವು ಕೂಡಾ ಹೌದು.
ರಾಮಾವತಾರ  ಮತ್ತು ಕೃಷ್ಣಾವತಾರದ ಅಂತರ ಹಾಗು ಸಾಮ್ಯವನ್ನು ರಾಯಚೂರು  ಜಿಲ್ಲೆಯ ಕಸಬಾ ಲಿಂಗಸೂಗೂರ ಗ್ರಾಮದ ವರದೇಂದ್ರ ತೀರ್ಥರ ಸಾನಿಧ್ಯದಲ್ಲಿ ವರದೇಶ ದಾಸರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. 
ಅವರ "ರಾಮ ಹರೇ ರಾಮ ಹರೇ, ಕೃಷ್ಣ ಹರೇ ಕೃಷ್ಣ ಹರೇ" ಅನ್ನೋ ಪದ್ಯ ಇವೆರೆಡು ಅವತಾರದ ದೃಷ್ಟಾಂತವನ್ನು ತುಂಬಾ ಸರಳವಾಗಿ ವಿವರಿಸಿದೆ. 
ಒಂದೆರಡು ನುಡಿಯನ್ನು ಇಲ್ಲಿ ಬರಿಯುತ್ತೆನೆ.

ಹರಧನುಭಂಗಿಸಿ ಹರುಷದಿಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕೃಷ್ಣ ಹರೇ...

ರಾಮ ತನ್ನ ಮದುವೆಗೋಸ್ಕರ ಮಿಥಿಲಾ ರಾಜ್ಯಕ್ಕೆ ಹೋಗಿ ಅಲ್ಲಿದ ಸ್ವಯಂವರದಲ್ಲಿ ಭಾಗವಹಿಸಿ, ಹರ ಧನುಷನ್ನು ಲೀಲಾಜಾಲವಾಗಿ ಮುರಿದು ಸೀತಾ ಮಾತೆಯನ್ನು ಮದುವೆ ಆಗುತ್ತಾನೆ,  ಆದರೇ ಅದೇ ಕೃಷ್ಣಾವತಾರದಲ್ಲಿ ಸುಮ್ಮನೆ ಒಂದು ಬಿನ್ನಹ ಪತ್ರವನ್ನು ನೋಡಿ, ಅಣ್ಣನ ಸೆರೆ ಇಂದ ಬಿಡಿಸಿಕೊಂಡು ಬಂದು ಏನು ನಡೆದಿಲ್ಲವೇನೋ ಅನ್ನೋ ತರಹ ರುಕ್ಮಿಣಿಯನ್ನು ಮದುವೆಯಾಗುತ್ತಾನೆ. 

ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ -
ವನು ಪಾಲಿಪ ಶ್ರೀ ಕೃಷ್ಣ ಹರೇ...

ತಂದೆಯ ಮಾತನ್ನು ಕೇಳಿ ಮಡದಿ ಹಾಗು ತಮ್ಮನನ್ನು ಕರೆದುಕೊಂಡು ವನವಾಸಕ್ಕೆ ರಾಮ ಹೋದರೆ, ಇಲ್ಲಿ ಕೃಷ್ಣ ತನ್ನ ಇಡೀ ಬಾಲ್ಯವನ್ನೇ ತನ್ನ ಗೊಲ್ಲ ಗೆಳೆಯರ ಜೊತೆಗೆ ಗೋಗಳ ಕಾಯುತ ವನದಲ್ಲೇ ಇರುತ್ತಾನೆ. 
ರಾಜ್ಯ ಭೋಗವನ್ನು ಬಿಟ್ಟು ರಾಮ ವನವಾಸಕ್ಕೆ ಹೋದರೆ ಕೃಷ್ಣಾ ವನದಲ್ಲೇ ಇದ್ದು ಮುಂದೆ ರಾಜನಾಗುತ್ತಾನೆ. 

ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ -
ಪರನ ಕಾಯ್ದ ಶ್ರೀ ಕೃಷ್ಣ ಹರೇ...

ಲಂಕೆಗೆ ಹೋಗುವುದಕ್ಕೆ ದಾರಿ ಬಿಡು ಎಂದು ಸಮುದ್ರರಾಜನನ್ನು ಕೇಳಿಕೊಳುತಾನೆ, ಸಮುದ್ರರಾಜ ಸ್ಪಂದಿಸದ ಕಾರಣಕ್ಕೆ ಇಡೀ ಸಮುದ್ರವನ್ಮೇ ಗುಡ್ಡಗಳಿಂದ ಬಂಧಿಸುತ್ತಾನೆ ಆದರೇ ಕೃಷ್ಣಾವತಾರದಲ್ಲಿ ಮಗು ಒಂದು ಚೆಂಡು ಹೇಗೆ ಏತತ್ತೋ ಹಾಗೇ ಗೋವರ್ಧನ ಗಿರಿಯನ್ನು ತನ್ನ ಕಿರಿಬೆರಳಿಂದ ಎತ್ತಿ ಎಲ್ಲಾ ತನ್ನ ಊರನ್ನೇ ರಕ್ಷಿಸುತ್ತಾನೆ. 

ಖಂಡಿಸಿದಶಶಿರ ಚಂಡಾಡಿದ ಕೋ -
ದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿಸಿದ ಕೃಷ್ಣ ಹರೇ...

ರಾವಣನ ದಶಶಿರವನ್ನು ತನ್ನ ಕೋದಂಡದಿಂದ ತುಂಡರಸಿ ಸಂಹರಿಸಿದರೆ, ಇಲ್ಲಿ ಕೃಷ್ಣ ತಾನು ಸ್ವತಃ ಏನು ಮಾಡದೆ ಪಾಂಡವರಿಂದ ಮಾಡಿಸಿ ಎಲ್ಲಾ ದುಷ್ಟ ಕೌರವರನ್ನ ಪಾಂಡವರಿಂದಾನೆ ಕೊಲ್ಲಿಸುತ್ತಾನೆ. 

ಭರತ ಪೇಳೆಲರಸತ್ವವ ಸ್ವೀ -
ಕರಿಸಿದತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮಕೃಪಾಕರ ಕೃಷ್ಣ ಹರೇ...

ಭರತ ರಾಮನನ್ನು ಭಿನಹಿಸಿದಂತೆಯೇ ವನವಾಸ ಮುಗಿಸಿ ಬಂದ ಮೇಲೆ ರಾಜ್ಯ ಪಟ್ಟದಲ್ಲಿ ಕೂರುತ್ತಾನೆ, ದ್ವಾಪರದಲ್ಲಿ ತನಗೇನು ಬೇಡ ಅನೋತರಹ ಬರೇ ಪಾಂಡವರನ್ನೇ ಮೆರೆಸುತ್ತಾನೆ. 

ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಜಯ ಕೃಷ್ಣ ಹರೇ...
ಶಬರಿ ಇದ್ದ ಜಾಗಕ್ಕೆ ತಾನೇ ಹೋಗಿ ಅವಳು ಕೊಟ್ಟ ಹಣ್ಣನ್ನು ತಿನ್ನುತಾನೆ, ಇಲ್ಲಿ ಕೃಷ್ಣ ಇಡೀ ಕೌರವರ ಆವ್ಹಾನವನ್ನೇ ತಿರಸ್ಕರಿಸಿ ವಿದುರನ ಮನೆಗೆ ಹೋಗಿ ಅವನ ಔತಣ ಸ್ವೀಕರಿಸುತ್ತಾನೆ.

ಯಾವುದೇ ಅವತಾರ ವಾಗಲಿ ಅವನ ಭಕುತರ ಅಡಿ  ಇರುವ ಕಾರುಣ್ಯ ಅಪಾರವಾದದ್ದು,  ಹಾಗು ಸಾಮಾನ್ಯವಾದದ್ದು. 
ಕೆಲವು ಸಾಮ್ಯ ತೋರಿಸುವ ಪದಗಳು.. 

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲುವಕ್ರಾಗಿದ್ದ ಬಲೆಯ ಕ್ಷಣದಲಿ
ಚಲುವೆಯ ಮಾಡಿದ ಕೃಷ್ಣ ಹರೇ...

ಅಹಲ್ಯೆಯನ್ನು ತನ್ನ ಪಾದದ ಸ್ಪರ್ಶದಿಂದೇ ಶಿಲೆಯಯಿಂದ ಚೆಲುವೆ ಮಾಡುತ್ತಾನೆ, ಅದೇ ಇಲ್ಲಿ ವಕ್ರವಾಗಿದ್ದ ಹೆಣ್ಣನ್ನು ಕ್ಷಣದಲ್ಲೇ ಚೆಲುವೆ ಮಾಡುತ್ತಾನೆ. 

ರಾಮ ರಾಮ ಯಂದು  ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ -
ದೇಶವಿಠಲ ಶ್ರೀ ಕೃಷ್ಣ ಹರೇ...

ರಾಮ ರಾಮ ಎಂದು ನಿತ್ಯದಿ ಭಜಿಪರಿಗೆ ಬೇಡಿದ ವರಗಳನ್ನು ಕೊಡುವ ರಾಮನೇ ನಿನಗೆ ನಮೋ, 
ಕೃಷ್ಣಾ ಕೃಷ್ಣಾ ಎಂದರೆ ಭಕ್ತರ ಸಕಲ ಅಭೀಷ್ಟೆಗಳನ್ನು ಪೂರ್ಣ ಮಾಡುವ ಕೃಷ್ಣಾ ನಿನಗೆ ನಮೋ ಎಂದು  ವರದೇಶ ದಾಸರು ತಮ್ಮ ಈ ಅಮೂಲ್ಯವಾದ ಕೃತಿಯಲ್ಲಿ ಹಾಡಿ ಹೋಗಿಳಿದಾರೆ.